ಹೊಸ ವಿಷಯ
  • Slider 1
  • Slider 2
  • Slider 3

ಶ್ರೀ ದೇವಳದ ಬಗ್ಗೆ

ಪರಷುರಾಮ ಸೃಷ್ಠಿಯಲ್ಲಿ ಮೋಕ್ಷದಾಯಕ ಸಪ್ತಕ್ಷೇತ್ರಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಶ್ರೀಕ್ಷೇತ್ರ ಕೊಲ್ಲೂರು ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾಗಿದೆ. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. ದೇವಿ ಮೂಕಾಂಬಿಕೆ ಇಲ್ಲಿಯ ಶಕ್ತಿ ದೇವತೆ. ಕೌಂಹಾಸುರ ಎಂಬ ರಾಕ್ಷಸನನ್ನು ಮೂಕನನ್ನಾಗಿ ವಧಿಸಿದ ಕ್ಷೇತ್ರ. ಮೂಕಾಂಬಿಕೆಯು ಒಂದು ಆಧಿಶಕ್ತಿ ಅಂದರೆ ಲಿಂಗದ ಎಡಭಾಗದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾ ಸರಸ್ವತಿಯರನ್ನು ಒಳಗೊಂಡವಳು, ಈ ರೀತಿಯ ಅಧಿಶಕ್ತಿಯನ್ನು ಕಾಣಬರುವುದು ಇಲ್ಲಿ ಮಾತ್ರ. ಉದ್ಭವಲಿಂಗವಾಗಿರುವ ಮೂಕಾಂಬಿಕೆಯು ಬ್ರಹ್ಮ, ವಿಷ್ಣು ಹಾಗೂ ಶಿವನನ್ನು ಬಲ ಭಾಗದಲ್ಲಿಯೂ ಸ್ಥಾಪಿಸಿಕೊಂಡಿದ್ದಾಳೆ. ಈ ಜ್ಯೋತಿರ್ಲಿಂಗವನ್ನು ಒಂದು ಚಿನ್ನದ ಎಳೆಯು ಬಲ ಹಾಗೂ ಎಡಭಾಗ ಎಂದು ಪ್ರತ್ಯೇಕಿಸುತ್ತದೆ. ಲಿಂಗದ ಎಡ ಭಾಗವು ಶಕ್ತಿ ಸಂಕೇತ ಹಾಗೂ ಅದರ ಬಲ ಭಾಗವು ಶಿವನನ್ನು ಪ್ರತಿನಿಧಿಸುತ್ತದೆ. ಆದಿಶಂಕರರು ತಪಸ್ಸಿನಲ್ಲಿದ್ದಾಗ ದೇವಿಯು ಅವರ ದಿವ್ಯದೃಷ್ಠಿಯಲ್ಲಿ ಕಾಣಿಸಿಕೊಂಡಿದ್ದರಿಂದಾಗಿ ಅವರು ಶ್ರೀ ಚಕ್ರದ ಯಂತ್ರದ ಮೇಲೆ ದೇವಿಯ ವಿಗ್ರಹವನ್ನು ಪ್ರತಿಸ್ಠಾಪಿಸಿದ್ದಾರೆ. ಶ್ರೀ ಶಂಕರಾಚಾರ್ಯರ ಪೀಠವು ಗರ್ಭಗುಡಿಯ ಪಶ್ಚಿಮ ದಿಕ್ಕಿನಲ್ಲಿದೆ. ಆದಿ ಶಂಕರಾಚಾರ್ಯರು ರೂಪಿಸಿರುವ ವಿಜಯಾಗಮ ಪದ್ದತಿಯಂತೆ ಇಂದಿಗೂ ಪೂಜೆಯನ್ನು ನೆಡೆಸಿಕೊಂಡು ಬರಲಾಗುತ್ತಿದೆ.

ಪ್ರತೀ ದಿನ ಬೆಳಿಗ್ಗೆ 5.00 ಗಂಟೆಗೆ ನಿರ್ಮಾಲ್ಯ ಪೂಜಾ ಸಮಯದಲ್ಲಿ ಭಕ್ತರು ಸ್ವಯಂಭೂ ಲಿಂಗವನ್ನು ನೊಡುವ ಅವಕಾಶ ಇದೆ. ಪ್ರತೀ ದಿನವು ದೇವಸ್ಥಾನದಲ್ಲಿ ತ್ರಿಕಾಲ ಪೂಜಾ ವ್ಯವಸ್ಥೆ ಇದ್ದು, ಸಾವಿರಾರು ಭಕ್ತರು ತಮ್ಮ ಸಮಸ್ಯೆ, ನೋವು, ಕಷ್ಟಗಳ ಪರಿಹಾರಕ್ಕಾಗಿ ಅಥವಾ ತಮ್ಮ ಹರಕೆಗಳನ್ನು ದೇವಿಗೆ ಅರ್ಪಿಸಲು ಮತ್ತು ಇಲ್ಲಿಯ ಪ್ರಕೃತಿ ಸೌಂದರ್ಯದ ಸವಿಯನ್ನು ಸವಿಯಲು ದೇವಿಯ ಸಮ್ಮುಖಕ್ಕೆ ಬೇಟಿ ಕೊಡುತ್ತಾರೆ, ಪ್ರತೀ ಮಂಗಳವಾರ, ಶುಕ್ರವಾರ, ಶ್ರಾವಣ ಮಾಸದಲ್ಲಿ, ಪಾಲ್ಗುಣ ಮಾಸದ ಮೂಲನಕ್ಷತ್ರದಲ್ಲಿ (ದೇವಿಯ ಜನ್ಮದಿನ), ನವರಾತ್ರಿ ಮತ್ತು ವಾರ್ಷಿಕ ರಥೋತ್ಸವ ಸಮಯದಲ್ಲಿ ಸಾವಿರಾರು ಭಕ್ತರು ವಿವಿಧ ರಾಜ್ಯಗಳಿಂದ ಶ್ರೀ ಕ್ಷೇತ್ರಕ್ಕೆ ಬೇಟಿ ಕೊಡುತ್ತಾರೆ. ಶ್ರೀ ದೇವಳಕ್ಕೆ ಪ್ರಮುಖ ಜನ ಪ್ರತಿನಿಧಿಗಳು ಸಿನಿಮಾ ತಾರೆಯರು, ಪ್ರಮುಖ ಉದ್ಯಮಿಗಳು ಹಾಗೂ ಇತರರು ಭೇಟಿ ಕೊಡುತ್ತಾರೆ. ಪ್ರಖ್ಯಾತ ಗಾಯಕರಾದ ಜೇಸುದಾಸ್ ಅವರು ಪತ್ರಿ ವರ್ಷ ತಮ್ಮ ಜನ್ಮ ದಿನದಂದು ಶ್ರೀ ಕ್ಷೇತ್ರದಲ್ಲಿ ಚಂಡಿಕಾ ಹೋಮವನ್ನು ನಡೆಸಿ ದೇವಿಯ ದರ್ಶನವನ್ನು ಪಡೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಕಟ್ಟಳೆಗಳಂತೆ ಎಲ್ಲಾ ಹಿಂದೂ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದು, ನವರಾತ್ರಿ ದಿನಗಳಲ್ಲಿ ಭಕ್ತರು ದೇವಸ್ಥಾನಕ್ಕೆ ಬೇಟಿ ನೀಡುವುದು ಉತ್ತುಂಗದಲ್ಲಿರುತ್ತದೆ.

ಮೂಕಾಂಬಿಕೆಯ ನೆಲೆಯಿಂದಾಗಿ ಕೊಲ್ಲೂರು ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಎಂದು ಡೆಲ್ಲಾ ವ್ಯಾಲ್ಲೆಯು ಉಲ್ಲೇಖಿಸಿದ್ದಾನೆ. ಈ ಸ್ಥಳವು ತುಂಬಾ ಪವಿತ್ರವಾದುದು ಹಾಗೂ ದೇಶ ವಿದೇಶಗಳಿಂದ ಅನೇಕ ಭಕ್ತರು ಈ ಸ್ಥಳಕ್ಕೆ ತೀರ್ಥಯಾತ್ರೆಯನ್ನು ಕೈಗೊಂಡು ಇಲ್ಲಿ ತಪಸ್ಸು ಹಾಗೂ ಧಾರ್ಮಿಕ ಕಾರ್ಯಗಳನ್ನು ನೆಡೆಸಿ ಆಶ್ರಯ ಪಡೆದು ತೆರಳುತ್ತಿದ್ದುದು ಕಂಡು ಬರುತ್ತದೆ. ಈ ಕ್ಷೇತ್ರಕ್ಕೆ ಸುಮಾರು ಶೇಕಡಾ 50 ಭಾಗದ ಭಕ್ತರು ಕೇರಳದಿಂದ, ಶೇಕಡಾ 25 ತಮಿಳುನಾಡಿನಿಂದ, ಶೇಕಡಾ 25 ಕರ್ನಾಟಕದಿಂದ ಬೇಟಿ ನೀಡುತ್ತಿದ್ದಾರೆ ಮತ್ತು ಆಂದ್ರ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ.

ದೇವಸ್ಥಾನದಲ್ಲಿ ಹಲವು ಘನ ಕಾರ್ಯಗಳು ನಡೆಯುತ್ತಿದೆ. ಕೊಲ್ಲೂರಿನ ಸುತ್ತಮುತ್ತ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳನ್ನು ನಡೆಸಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಒಳ್ಳೆಯ ವಸತಿ ಗೃಹಗಳನ್ನು ,ಉದ್ಯಾನವನಗಳನ್ನು ನಿರ್ಮಿಸಿಲಾಗಿದೆ